ತೋಡ -
 	ತಮಿಳುನಾಡು ಪ್ರಾಂತ್ಯದ ನೀಲಗಿರಿ ಅರಣ್ಯವಲಯದಲ್ಲಿನ ಆದಿವಾಸಿಗಳ ಒಂದು ವರ್ಗ ಮಾತನಾಡುವ ಭಾಷೆ. ಇದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಗಳಲ್ಲಿ ಒಂದು. ಇದನ್ನು ಮಾತನಾಡುವವರ ಸಂಖ್ಯೆ ಸುಮಾರು 600. ಅವರು ತಮ್ಮನ್ನು `ಗಂಡು ಗಳೆಂದು ಕರೆದುಕೊಳ್ಳುತ್ತಾರೆ. ಅವರ ನೆರೆಹೊರೆಯವರು ಅವರಿಗೆ ಕೊಟ್ಟಿರುವ ಹೆಸರು ತೋಡ ಎಂದು.
 (ನೋಡಿ- ಆದಿವಾಸಿಗಳು)

ದಕ್ಷಿಣ ಭಾರತದ ಇತರ ಜನಾಂಗಗಳೊಡನೆ ಹೋಲಿಸಿದರೆ, ಮಾನವ ಕುಲಶಾಸ್ತ್ರದ ಪ್ರಕಾರ ತೋಡ ವರ್ಗ ತುಂಬ ಅಪಸರಣಗೊಂಡಿರುವಂತೆ ತೋರುತ್ತದೆ. ಅವರ ಆರ್ಥಿಕತೆ ಮತ್ತು ಧರ್ಮಕ್ಕೆ ಎಮ್ಮೆಗಳ ಹಿಂಡೇ ಆದಾರವಾಗಿದೆ. ಅವರ ಭಾಷೆಯೂ ಅಷ್ಟೆ. ದ್ರಾವಿಡ ಭಾಷೆಗಳಲ್ಲಿಯೇ ಇದು ಅತ್ಯಂತ ಅಪಸರಣಗೊಂಡಿರುವಂಥದು. ಇತರ ಭಾಷೆಗಳೊಡನೆ ಹೋಲಿಸಿದರೆ, ಬಹುಶ: ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚುಕಾಲ ಇದು ಪ್ರತ್ಯೇಕವೂ, ಸ್ವತಂತ್ರವೂ ಆಗಿ ಬೆಳೆದುಬಂದಿರುವುದೇ ಇದರ ಅಪಸರಣಕ್ಕೆ ಕಾರಣವಾಗಿದೆ. ತೀರ ಹತ್ತಿರದ ಭಾಷಾಸಂಬಂಧವಿರುವುದು ಅಂದರೆ ತಮಿಳು ಮತ್ತು ಮಲೆಯಳಂ ಭಾಷೆಗಳೊಡನೆ, ಮಲೆಯಾಳಂ ಭಾಷೆಯ ವಿಚಾರದಲ್ಲಿಯಂತೂ ಅದರ ಪೂರ್ವ-ಪೂರ್ವ ಸ್ಥಿತಿಯೊಡನೆ ಈ ಸಂಬಂಧ ಕಾಣದೊರೆಯುತ್ತದೆ. ಪೂರ್ವಸ್ತರಗಳ ಎದುರಿನಲ್ಲಿ ಪೂರ್ವ-ದ್ರಾವಿಡ ಅದಿಮ * ಕ ಕ್ಕೆ ತಮಿಳಲ್ಲಿ ಆಗುವಂಥ ತಾಲವ್ಯೀಕರಣದ ಚಿಹ್ನೆಗಳೇನೂ ತೋಡದಲ್ಲಿ ಕಾಣದೊರೆಯುವದಿಲ್ಲ. ಆದ್ದರಿಂದ ಇದನ್ನು ಮಲೆಯಾಳಂ ಮತ್ತು ಹಳೆಯ ತಮಿಳುಗಳಂತೆ ತೋಡದಲ್ಲಿಯೂ * ತತರ್ - ಎಂಬುದಕ್ಕೆ ಉತ್ತಮ ಅಥವಾ ಮಧ್ಯಮಪುರುಷ ಸೂಚಿಸುವ ವ್ಯಕ್ತಿಗೆ ಕೊಡುವುದು ಎಂಬ ಅರ್ಥವೇ ಇದೆ. ಸಾಮಾನ್ಯವಾಗಿ ಧಾತು ಮತ್ತು ಭೂತಕಾಲದ ಮಲೆಯಾಳಂಗಳ ರಚನಾ ವ್ಯವಸ್ಥೆಗೆ ತುಂಬ ಹತ್ತಿರ ಬರುತ್ತದೆ. ಜೊತೆಗೆ ಭೂತ ಕಾಲದ ಕ್ರಿಯಾಪದ ಉಷ್ಮೋಚ್ಚಾರಯಕ್ತ ಪರಪ್ರತ್ಯಯವನ್ನೂ ಹೊಂದಿರುತ್ತದೆ. ಇದು ಉತ್ತರ ದ್ರಾವಿಡ, ಕುಯಿ, ಗೋಡಿ, ಪರ್ಜಿ, ತೆಲಗು ಮತ್ತು ವಂತಿಚಿಣ್‍ಗಳಂಥ ಹಳೆಯ ತಮಿಳು ರೂಪಗಳಲ್ಲಿ ಕಾಣದೊರೆಯುವ ಭೂತಕಾಲದ ಉಷ್ಮೋಚ್ಛಾರಯುಕ್ತ ಪರಪ್ರತ್ಯಗಳೊಡನೆ ಸಂಬಂಧವನ್ನು ಹೊಂದಿರುವಂತದ್ದು. ಲಕ್ಷಣಗಳ ಈ ಸಂಯೋಗ ಮತ್ತು ಇತರ ಕಾರಣಗಳಿಂದಾಗಿ ತೋಡ ಭಾಷೆಯನ್ನು ದಕ್ಷಿಣ ದ್ರಾವಿಡದಲ್ಲಿನ ಉಪವಂಶವಾಗಿ ತಮಿಳು-ಮಲೆಯಾಳಂಗಳೊಡನೆ ವರ್ಗೀಕರಿಸಬೇಕಾಗುತ್ತದೆ.

ತೋಡಭಾಷೆ ತುಂಬ ಹೆಚ್ಚಿನ ಪ್ರಮಾಣದ ಧ್ವನಿ ಪಲ್ಲಟ, ಧ್ವನಿಮಾ ವಿಚ್ಛೇದನ ಮತ್ತು ಬಹುತೇಕವಾಗಿ ಪ್ರಥಮೇತರ ಅಕ್ಷರಗಳಲ್ಲಿನ ಸ್ವರಗಳು ಲೋಪವಾಗುವುದೂ ಸೇರಿದಂತೆ ಇತರ ಬೆಳವಣಿಗೆಗಳಿಗೆ ಒಳಗಾಗಿದೆ. ಲಿಂಗವ್ಯವಸ್ಥೆಯ ಲೋಪ, ನಾಮಪದಕ್ಕೆ ಹೊಸ ಬಹುವಚನ ಪ್ರತ್ಯಯ ಬಂದು ಸೇರಿರುವುದು, ಭೂತಕಾಲದ ಧಾತುವನ್ನೇ ವರ್ತಮಾನ ಕಾಲದ ಮತ್ತು ಭವಿಷ್ಯತ್ ಕಾಲಗಳಲ್ಲಿ ಬಳಸುವುದು, ಹೊಸ ಪ್ರೇರಣಾರ್ಥಕ ಪರಪ್ರತ್ಯಯ ರೂಪುಗೊಂಡಿರುವುದು- ಇದೇ ಮೊದಲಾದ ಇತರ ಅನೇಕ ಬದಲಾವಣೆಗಳೂ ಉಂಟಾಗಿವೆ. ಇವುಗಳ ಪರಿಣಾಮವೇ ಬಾಹ್ಯ ಸ್ವರೂಪದಲ್ಲಿ ಇತರ ದ್ರಾವಿಡ ಭಾಷೆಗಳಿಗಿಂತ ಬಹಳ ಭಿನ್ನವಾಗಿ ತೋರುವದು ಈ ಭಾಷೆ. 				 								  (ಎಂ.ಬಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ